...

ರಿಕಿ ಕೇಜ್, 3 ಬಾರಿ ಗ್ರ್ಯಾಮಿ ಪ್ರಶಸ್ತಿ ಪುರಸ್ಕೃತ ಸಂಗೀತಗಾರ, ವಿಶ್ವಸಂಸ್ಥೆಯ ಗುಡ್‌ವಿಲ್ ರಾಯಭಾರಿ, ಪರಿಸರವಾದಿ

ಹಲವಾರು ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತದ ಪ್ರಸಿದ್ಧ ಸಂಗೀತ ಸಂಯೋಜಕ ಹಾಗೂ ಪರಿಸರವಾದಿ. ತಮ್ಮ ಸಂಗೀತ ಹಾಗೂ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳಿಂದಾಗಿ ಜಾಗತಿಕ ಮನ್ನಣೆಯನ್ನು ಗಳಿಸಿದ್ದಾರೆ. ಪ್ರತಿಷ್ಠಿತ ಗ್ರ್ಯಾಮಿ ಪುರಸ್ಕಾರವನ್ನು 3 ಬಾರಿ ಗೆದ್ದಿದ್ದಾರೆ. 20 ದೇಶಗಳಲ್ಲಿ 100ಕ್ಕೂ ಹೆಚ್ಚು ಪ್ರಶಸ್ತಿ ಗಳಿಸಿದ್ದಾರೆ. ಅಮೆರಿಕದ ಬಿಲ್‌ಬೋರ್ಡ್ಸ್ ಚಾರ್ಟ್ಸ್ ನಲ್ಲಿ ರಿಕಿ ಅವರ ಸಾಧನೆ ಉತ್ತುಂಗಕ್ಕೇರಿದೆ. ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕಾರ್ಯದಲ್ಲಿ ಸದ್ಭಾವನಾ ರಾಯಭಾರಿ, ಯುಎನ್‌ಸಿಸಿಡಿ ಲ್ಯಾಂಡ್ ಅಂಬಾಸಡರ್, ಯುನೆಸ್ಕೋದ ಎಂಜಿಐಇಪಿ ಗ್ಲೋಬಲ್ ಅಂಬಾಸಡರ್ ಫಾರ್ ಕೈಂಡ್‌ನೆಸ್, ಯುನಿಸೆಫ್ ಸೆಲೆಬ್ರಿಟಿ ಸಪೋರ್ಟರ್, ಅರ್ತ್ ಡೇ ನೆಟ್‌ವರ್ಕ್ ಅಂಬಾಸಡರ್ ಆಗಿ ಸೇವೆ ಸಲ್ಲಿಸಿದ್ದಾರೆ. ನ್ಯೂಯಾರ್ಕ್ ಹಾಗೂ ಜಿನೆವಾದಲ್ಲಿರುವ ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಸೇರಿ ವಿಶ್ವದಾದ್ಯಂತ ಪ್ರತಿಷ್ಠಿತ ಸ್ಥಳಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಪರಿಸರದ ಬಗ್ಗೆ ರಿಕಿ ಅವರಿಗೆ ಇರುವ ಅತ್ಯಾಸಕ್ತಿಯು ಸರ್ ಡೇವಿಡ್ ಅಟ್ಟೆನ್‌ಬರೋ ನಿರೂಪಿಸಿರುವ "ವೈಲ್ಡ್ ಕರ್ನಾಟಕ' ಸಾಕ್ಷ್ಯಚಿತ್ರ ಸೇರಿದಂತೆ ಅವರ ಸಂಗೀತದಲ್ಲಿ ಪ್ರತಿಬಿಂಬಿತವಾಗಿದೆ.

ಪ್ರಶಾಂತ್ ಪ್ರಕಾಶ್, ರಾಜ್ಯ ಸ್ಟಾರ್ಟಪ್ ವಿಷನ್ ಗ್ರೂಪ್‌ನ ಅಧ್ಯಕ್ಷ, ಸರಣಿ ಆತಿಥ್ಯ ಉದ್ಯಮಿ

ಕರ್ನಾಟಕ ಸರ್ಕಾರದ "ಸ್ಟಾರ್ಟಪ್ ವಿಷನ್ ಗ್ರೂಪ್'ನ ಹಾಲಿ ಅಧ್ಯಕ್ಷರು. ಹಾಗೆಯೇ ಯಶಸ್ವಿ ಉದ್ಯಮಿ. ಅಮೆರಿಕದ ವೆಂಚರ್ ಕ್ಯಾಪಿಟಲ್ ಕಂಪನಿ ಆಕ್ಸೆಲ್ ಪಾರ್ಟ್‌ನರ್ಸ್‌ನ ಸಂಸ್ಥಾಪಕ ಭಾರತೀಯ ಪಾಲುದಾರರು. ಫ್ಲಿಪ್‌ಕಾರ್ಟ್, ಫ್ರೆಷ್‌ವರ್ಕ್ಸ್ ಹಾಗೂ ಬುಕ್‌ಮೈಶೋ ಸೇರಿದಂತೆ ಭಾರತದ ಹಲವು ಟೆಕ್ ಸ್ಟಾರ್ಟಪ್‌ಗಳಲ್ಲಿ ಆರಂಭಿಕ ಹೂಡಿಕೆಗಾರರು. ತಮ್ಮ ಜೀವನದಲ್ಲಿ ಹಲವು ಪ್ರಥಮಗಳನ್ನು ಸಾಧಿಸಿದ್ದಾರೆ. ಶಿಕ್ಷಣ, ಪರಿಸರ ಹಾಗೂ ನೀತಿ ನಿರೂಪಣೆಗೆ ಸಂಬಂಧಿಸಿದಂತೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ಡಿಸ್ಕವರಿ ವಿಲೇಜ್ ಬೆಂಗಳೂರು ಹಾಗೂ ಗೋ ನೇಟಿವ್‌ನಂತಹ ಸಂಸ್ಥೆಗಳ ಮೂಲಕ ಆತಿಥ್ಯ ಉದ್ಯಮದಲ್ಲಿ ಸರಣಿ ಉದ್ಯಮಿಯಾಗಿದ್ದಾರೆ. ಪರಿಸರವಾದಿಯಾಗಿರುವ ಪ್ರಕಾಶ್ ಅವರು, ಯುನೈಟೆಡ್ ವೇ ಸ್ಥಳೀಯ ಘಟಕದ ಮುಖ್ಯಸ್ಥರಾಗಿದ್ದಾರೆ. "ವೇಕ್ ದ ಲೇಕ್' ಅಭಿಯಾನ ಎಂಬ ವಿಶಿಷ್ಟ ಸಾಮಾಜಿಕ ಮಾದರಿ ಮೂಲಕ ಬೆಂಗಳೂರಿನ 22 ಕೆರೆಗಳನ್ನು ಸಂರಕ್ಷಿಸಿ, ಪುನರುಜ್ಜೀವನಗೊಳಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದ್ದಾರೆ.

ಅಮೋಘವರ್ಷ, ವೈಲ್ಡ್ ಕರ್ನಾಟಕ, ಗಂಧದ ಗುಡಿ ಚಿತ್ರಗಳ ನಿರ್ದೇಶಕ, ನಿಸರ್ಗ ಛಾಯಾಚಿತ್ರಗಾರ

ಅಮೋಘವರ್ಷ ಜೆ.ಎಸ್. ಅವರು ಭಾರತದ ಪ್ರಸಿದ್ಧ ವನ್ಯಜೀವಿ ಛಾಯಾಗ್ರಾಹಕ ಹಾಗೂ ಚಿತ್ರ ನಿರ್ಮಾಣಕಾರ. ಪರಿಸರಕ್ಕೆ ಸಂಬಂಧಿಸಿದ ಸಿನಿಮಾಗಳಲ್ಲಿ ಅಸಾಧಾರಣ ಸೇವೆ ಸಲ್ಲಿಸಿ ಜನಪ್ರಿಯರಾಗಿದ್ದಾರೆ. ನ್ಯಾಷನಲ್ ಜಿಯೋಗ್ರಾಫಿಕ್, ಬಿಬಿಸಿ ಹಾಗೂ ಇನ್ನಿತರೆ ಮುಂಚೂಣಿ ಸಂಸ್ಥೆಗಳ ಜತೆ ವಿವಿಧ ಯೋಜನೆಗಳಲ್ಲಿ ಕೈಜೋಡಿಸಿದ್ದಾರೆ. 67ನೇ ರಾಷ್ಟ್ರೀಯ ಸಿನಿಮಾ ಪ್ರಶಸ್ತಿ ಹಾಗೂ ಇಂಪ್ಯಾಕ್ಟ್‌ಡಾಕ್ಸ್ ಅವಾರ್ಡ್ ಆ್ ಮೆರಿಟ್ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಅವರ ವಿಡಿಯೋವನ್ನು ಪ್ಯಾರಿಸ್‌ನಲ್ಲಿ 2015ರಲ್ಲಿ ನಡೆದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಬಿತ್ತರಿಸಲಾಗಿತ್ತು. ಅಮೋಘವರ್ಷ ಅವರ ಅತ್ಯಂತ ಮೆಚ್ಚುಗೆ ಗಳಿಸಿದ ಪ್ರಕೃತಿ ಚರಿತ್ರೆಯ ಸಾಕ್ಷ್ಯಚಿತ್ರ "ವೈಲ್ಡ್ ಕರ್ನಾಟಕ'ವನ್ನು ಸರ್ ಡೇವಿಡ್ ಅಟ್ಟೆನ್‌ಬರೋ ಅವರು ನಿರೂಪಿಸಿದ್ದಾರೆ. ಇದನ್ನು 2020ರಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಪ್ರದರ್ಶಿಸಲಾಗಿದೆ. ಅಲ್ಲಿನ ಸಭಿಕರನ್ನು ಉದ್ದೇಶಿಸಿ ಅಮೋಘವರ್ಷ ಭಾಷಣ ಕೂಡ ಮಾಡಿದ್ದಾರೆ. ಕನ್ನಡದ ಜನಪ್ರಿಯ ನಟ ಪುನೀತ್ ರಾಜಕುಮಾರ್ ಅವರು ಇರುವ, ಕರ್ನಾಟಕದ ನೈಸರ್ಗಿಕ ಅದ್ಭುತ ಸ್ಥಳಗಳಿಗೆ ಜನರನ್ನು ಕರೆದೊಯ್ಯುವ "ಗಂಧದ ಗುಡಿ' ಎಂಬ ಡಾಕ್ಯು-ಮೂವಿಯನ್ನು ಕೂಡ ಅಮೋಘವರ್ಷ ಅವರು ನಿರ್ಮಿಸಿದ್ದಾರೆ.

ಡಾ.ದೇವರಕೊಂಡ ರೆಡ್ಡಿ, ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ, ಪುರಾತತ್ವ ಹಾಗೂ ಇತಿಹಾಸ ತಜ್ಞ

ಪ್ರಸಿದ್ಧ ಇತಿಹಾಸಕಾರ ಹಾಗೂ ಪುರಾತತ್ವ ಶಾಸ್ತ್ರಜ್ಞ. ಆ ಕ್ಷೇತ್ರದಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ಕರ್ನಾಟಕದ ಪ್ರತಿಷ್ಠಿತ ಇತಿಹಾಸ ಸಂಸ್ಥೆಯಾಗಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿದ್ದಾರೆ. ಬೆಂಗಳೂರಿನ ಮಿಥಿಕ್ ಸೊಸೈಟಿ, ಕನ್ನಡ ಸಾಹಿತ್ಯ ಪರಿಷತ್ತು, ಮೈಸೂರಿನ ಬಿ.ಎಂ.ಶ್ರೀ ಸ್ಮಾರಕ ಟ್ರಸ್ಟ್, ಎಪಿಗ್ರಾಫಿಕಲ್ ಸೊಸೈಟಿ ಆ್ ಇಂಡಿಯಾ ಸೇರಿ ಹಲವು ಸಂಸ್ಥೆಗಳ ಸದಸ್ಯರಾಗಿದ್ದಾರೆ. ತಲಕಾಡಿನ ಗಂಗರ ಆಳ್ವಿಕೆಯ ದೇಗುಲಗಳ ಕುರಿತು ಡಾ| ರೆಡ್ಡಿ ಅವರು ನಡೆಸಿದ ಸಂಶೋಧನೆಗೆ ಡಾಕ್ಟರೆಟ್ ಕೂಡ ಲಭಿಸಿದೆ. ಪುರಾತತ್ವ ಶಾಸ್ತ್ರ, ವಾಸ್ತುಶಾಸ್ತ್ರ, ದೇಗುಲ ಹಾಗೂ ಐತಿಹಾಸಿಕ ಹಸ್ತಪ್ರತಿಗಳ ವಿಜ್ಞಾನಕ್ಕೆ ಸಂಬಂಧಿಸಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ, ತರ್ಜುಮೆ ಮಾಡಿದ್ದಾರೆ. ಗಂಗರ ಆಳ್ವಿಕೆಯ ಶಿಲ್ಪಕಲೆಗಳು, ಶ್ರವಣಬೆಳಗೊಳದ ಬಸದಿಗಳ ವಿನ್ಯಾಸ, ಹಸ್ತಪ್ರತಿಗಳ ಸೃಷ್ಟಿ ಹಾಗೂ ಅಭಿವೃದ್ಧಿ ಕುರಿತು ಹಲವು ಕೃತಿಗಳನ್ನು ಹೊರತಂದಿದ್ದಾರೆ.

ವಿಲಾಸ್ ನಾಯಕ್, ವಿಶ್ವವಿಖ್ಯಾತ ವೇಗದ ಚಿತ್ರ ಕಲಾವಿದ, ಯುವ ವಿಶ್ವ ಪ್ರವಾಸಿಗ

ವೇಗವಾಗಿ ಚಿತ್ರಗಳನ್ನು ರಚಿಸುವುದರಲ್ಲಿ ನಿಷ್ಣಾತರಾಗಿರುವ ವಿಲಾಸ್ ನಾಯಕ್ ಅವರು, ಕೆಲವೇ ನಿಮಿಷಗಳಲ್ಲಿ ಚಿತ್ರಗಳನ್ನು ಬರೆದು ಅಚ್ಚರಿ ಮೂಡಿಸುವುದಕ್ಕೆ ಹೆಸರುವಾಸಿಯಾಗಿದ್ದಾರೆ. ಇಂಡಿಯಾಸ್ ಗಾಟ್ ಟ್ಯಾಲೆಂಟ್ ಸೀಸನ್ ೩ರ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದರು. "ಇಸಿ ಲೈವ್ ಕೋಶೆಂಟ್ ಮೋಸ್ಟ್ ಇನ್ನೋವೇಟಿವ್ ಆ್ಯಕ್ಟ್ ಅವಾರ್ಡ್'ಗೆ 2012ರಲ್ಲಿ ಭಾಜನರಾಗಿದ್ದರು. ಭಾರತದ ಅತ್ಯಂತ ಪ್ರಮುಖ ಸಮಾರಂಭಗಳಲ್ಲಿ ಹಾಗೂ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನ, ಸಿಂಗಾಪುರ ಅಧ್ಯಕ್ಷರ ಸ್ಟಾರ್ ಚಾರಿಟಿ ಶೋ, ಲಂಡನ್‌ನ ಏಷ್ಯನ್ ಅಚೀವರ್ಸ್‌ ಅವಾರ್ಡ್ಸ್, ಏಷ್ಯಾಸ್ ಗಾಟ್ ಟ್ಯಾಲೆಂಟ್ ಸೇರಿ 23 ದೇಶಗಳಲ್ಲಿ ಅವರು ತಮ್ಮ ಕಲಾ ಪ್ರೌಢಿಮೆ ಮೆರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ, ಪ್ರಣಬ್ ಮುಖರ್ಜಿ ಅವರುಗಳ ಎದುರು ತಮ್ಮ ಕೈಚಳಕ ಪ್ರದರ್ಶಿಸಿದ್ದಾರೆ. ವೇಗವಾಗಿ ಚಿತ್ರ ಬರೆಯುವ ಕೌಶಲ್ಯದ ಜತೆಗೆ ಸಾಮಾಜಿಕ ಕಾರ್ಯಕರ್ತ ಕೂಡ ಆಗಿದ್ದಾರೆ. ಮಕ್ಕಳ ದೌರ್ಜನ್ಯ, ಲಿಂಗ ಅಸಮಾನತೆ ಹಾಗೂ ಪರಿಸರದಂತಹ ಗಂಭೀರ ವಿಚಾರಗಳ ಕುರಿತು ಜಾಗೃತಿ ಮೂಡಿಸಲು ತಮ್ಮ ಕಲೆಯನ್ನು ಬಳಸುತ್ತಾರೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯವಾಗಿ ಯಾತ್ರಿಕರಾಗಿರುವ ಅವರು ವಿಶ್ವದ ಅದ್ಭುತಗಳನ್ನು ಸೆರೆ ಹಿಡಿವ ಕಲಾದೃಷ್ಟಿಯನ್ನೂ ಹೊಂದಿದ್ದಾರೆ.

ಜಗದೀಶ್ ಜಿ., ಕರ್ನಾಟಕ ರಾಜ್ಯ ಪ್ರವಾಸೋದ್ಯಮ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ

ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ. ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಶಾಲೆಯ ಪ್ರಾಂಶುಪಾಲ, ಹಲವು ತಾಲೂಕುಗಳಲ್ಲಿ ಕೆಎಎಸ್ ಅಧಿಕಾರಿ, ವಿವಿ‘ ಜಿಲ್ಲಾ ಪಂಚಾಯಿತಿಗಳ ಸಿಇಒ, ಹಲವು ಸರ್ಕಾರಿ ಇಲಾಖೆಗಳ ಆಯುಕ್ತ ಸೇರಿದಂತೆ ಸರ್ಕಾರದ ವಿವಿ‘ ಹಂತಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಉತ್ತಮ ಆಡಳಿತ ಹಾಗೂ ಸಾರ್ವಜನಿಕ ಹಿತಾಸಕ್ತಿ ಇವರ ಪ್ರಮುಖ ಆದ್ಯತೆ. ಜಗದೀಶ್ ಅವರ ನಾಯಕತ್ವದಲ್ಲಿ ಮೈಸೂರು ನಗರ ಪ್ರಧಾನಮಂತ್ರಿಗಳ ಸ್ವಚ್ಛ ಭಾರತ ಮಿಷನ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿತ್ತು ಹಾಗೂ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕೋಲಾರ ಜಿಲ್ಲೆ ಕೂಡ ಪ್ರಥಮ ಸ್ಥಾನ ಗಳಿಸಿತ್ತು. ಕೆಎಸ್‌ಟಿಡಿಸಿಯ ಪ್ರವಾಸೋದ್ಯಮ ವ್ಯವಹಾರವನ್ನು ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ. ಕರ್ನಾಟಕದಾದ್ಯಂತ ಸುತ್ತಾಡಿದ್ದಾರೆ. ಪ್ರವಾಸಿ ತಾಣಗಳ ಬಗ್ಗೆ ಆಳವಾದ ಅನುಭವವಿದೆ.

ರವಿ ಹೆಗಡೆ, ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ

ರವಿ ಹೆಗಡೆ ಅವರು ಸಾಧಕ ಪತ್ರಕರ್ತ ಹಾಗೂ ಮಾಧ್ಯಮ ಕ್ಷೇತ್ರದ ಪರಿಣತ. ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣ ನ್ಯೂಸ್ ಮಾಧ್ಯಮ ಸಂಸ್ಥೆಗಳ ಪ್ರಧಾನ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದ ಬಗ್ಗೆ ಅತ್ಯುತ್ಸಾಹ ಹೊಂದಿರುವ ಅವರು ಮುದ್ರಣ, ಟೀವಿ ಹಾಗೂ ಡಿಜಿಟಲ್ ಮಾಧ್ಯಮ ಕ್ಷೇತ್ರದ ತಜ್ಞ ಎಂಬ ಗೌರವವನ್ನು ಗಳಿಸಿಕೊಂಡಿದ್ದಾರೆ. ಅತ್ಯುತ್ಕೃಷ್ಟ ಹಿನ್ನೆಲೆ ಹೊಂದಿರುವ ಅವರು ರಾಜಕೀಯ, ತಂತ್ರಜ್ಞಾನ, ಉದ್ಯಮ, ಆರ್ಥಿಕತೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸೇರಿದಂತೆ ವಿಶಾಲ ವಿಷಯಗಳಲ್ಲಿ ಅನು‘ವಿ. ರೂಪತಾರಾ ಸಂಪಾದಕರಾಗಿದ್ದ ಅವಧಿಯಲ್ಲಿ ಭಾರತದ ಮೊತ್ತ ಮೊದಲ 3ಡಿ ಫಿಲಂ ಮ್ಯಾಗಜೀನ್ ಹೊರತರುವ ಮೂಲಕ ರವಿ ಅವರು 2012ರಲ್ಲಿ ಇತಿಹಾಸ ಸೃಷ್ಟಿಸಿದ್ದರು. ಈ ಸಾಧನೆ ಮಾಧ್ಯಮದಲ್ಲಿನ ರವಿ ಅವರ ನವೀನ ಪ್ರಯತ್ನ ಹಾಗೂ ಎಲ್ಲ ಎಲ್ಲೆಗಳನ್ನು ಮೀರಿ ಹೊಸತನ್ನು ಸಾಧಿಸುವ ಬದ್ಧತೆಗೆ ಸಾಕ್ಷಿ. ವಿಶ್ವದ 7 ಅದ್ಭುತಗಳ ಪೈಕಿ ಕೆಲವು ಸೇರಿದಂತೆ 26 ದೇಶಗಳನ್ನು ಸುತ್ತಿರುವ ರವಿ ಅವರೊಬ್ಬ ಅತ್ಯಾಸಕ್ತ ಪ್ರವಾಸಿಗ. ತಮ್ಮ ತವರು ರಾಜ್ಯ ಕರ್ನಾಟಕದ ಸೌಂದರ್ಯವನ್ನು ಅನ್ವೇಷಿಸುವ ಹಾಗೂ ಉತ್ತೇಜಿಸುವ ರವಿ ಅವರ ಅತೀವ ಆಸಕ್ತಿಯೇ ಕರ್ನಾಟಕದ 7 ಅದ್ಭುತ ಯೋಜನೆಗಳ ಸೃಷ್ಟಿಗೆ ಕಾರಣವಾಗಿದೆ. ಈ ಅಭಿಯಾನ ಅನುಷ್ಠಾನದಲ್ಲಿ ಅವರು ಅತ್ಯಂತ ನಿಕಟವಾಗಿ ತೊಡಗಿಸಿಕೊಂಡಿದ್ದಾರೆ.