...

ಒಂದು ರಾಜ್ಯ.. ಹಲವು ಜಗತ್ತು. ಅದು ಕರ್ನಾಟಕದ ಹೆಗ್ಗಳಿಕೆ. ಇಲ್ಲಿ ಶಿಲ್ಪಕಲಾ ವೈಭವದಿಂದ ಪ್ರಕೃತಿ ನಿರ್ಮಿತ ತಾಣಗಳ ತನಕ, ಪಾರಂಪರಿಕ ಕಟ್ಟಡಗಳಿಂದ ಹಿಡಿದು ನಿಸರ್ಗದ ವಿಸ್ಮಯಗಳ ತನಕ, ಸುಂದರ ಕರಾವಳಿಯಿಂದ ದುರ್ಗಮ ಕಾನನದ ತನಕ, ಮಾನವ ನಿರ್ಮಿತ ಅಚ್ಚರಿಗಳಿಂದ ಜಲಪಾತಗಳ ತನಕ ರಮಣೀಯ ಪ್ರೇಕ್ಷಣೀಯ ತಾಣಗಳು ನೂರಾರು. ಕನ್ನಡದ ನೆಲದುದ್ದಕ್ಕೂ ಹಬ್ಬಿರುವ ಇಂಥ ಅದ್ಭುತ ರಮ್ಯ ತಾಣಗಳು ಪ್ರವಾಸಿಗರ ಸ್ವರ್ಗ. ಗಿರಿಧಾಮಗಳಾದ ಚಿಕ್ಕಮಗಳೂರು, ಕೊಡಗು, ಕಾಡು, ಬೆಟ್ಟಗಳು ಕಂಗೊಳಿಸುವ ಉತ್ತರ ಕನ್ನಡ, ಕಪ್ಪುಮಣ್ಣಿನ ಫಲವತ್ತತೆ ಮತ್ತು ಹಬ್ಬಿದ ಬಯಲು ಕಣ್ತುಂಬುವ ಉತ್ತರ ಕರ್ನಾಟಕ, ಗತವೈಭವ ಸಾರುವ ಹಂಪೆ, ಶರಾವತಿಯ ನಿತ್ಯೋತ್ಸವ, ಮೈಸೂರು ಅರಮನೆಯ ಮಹೋತ್ಸವ, ಕಡಲ ತೀರದ ಪ್ರಭಾವಳಿಗಳಿಂದ ಕನ್ನಡ ನಾಡು ಸಂಪನ್ನ.

ಈ ಎಲ್ಲಾ ತಾಣಗಳೂ ವಿಶ್ವದ ಏಳು ಅದ್ಭುತಗಳ ಸಾಲಲ್ಲಿ ನಿಲ್ಲುವಂಥವು. ಅವುಗಳನ್ನು ಗುರುತಿಸುವ ಅಭಿಯಾನವನ್ನು ಕನ್ನಡಪ್ರಭ ಮತ್ತು ಏಷ್ಯಾನೆಟ್ ಸುವರ್ಣನ್ಯೂಸ್ ಆರಂಭಿಸುತ್ತಿದೆ. ನಮ್ಮ ಕನ್ನಡನಾಡಿನ ಏಳು ಅದ್ಭುತಗಳನ್ನು ಹುಡುಕಿ, ಗುರುತಿಸಿ, ಅವುಗಳನ್ನು ಜಗತ್ತಿನ ಮುಂದಿಡುವ ಕಾರ್ಯ ಇದೀಗ ಆರಂಭವಾಗಿದೆ. ಈ ಅಭಿಯಾನದ ಹೆಸರೇ ೭ ವಂಡರ್ಸ್ ಆಫ್ ಕರ್ನಾಟಕ, ಕರ್ನಾಟಕದ ಏಳು ಅದ್ಭುತಗಳು.

ಚೀನಾದ ಮಹಾಗೋಡೆಯಿಂದ ಭಾರತದ ತಾಜಮಹಲಿನ ತನಕ ವಿಶ್ವದ ಏಳು ಅದ್ಭುತಗಳು ನಮ್ಮ ಮುಂದಿವೆ. ಇದು ಕರ್ನಾಟಕದ ಅದ್ಭುತಗಳನ್ನು ಹುಡುಕುವ, ಗುರುತಿಸುವ ಸಮಯ. ಈ ಅಭಿಯಾನದಲ್ಲಿ ಕೈ ಜೋಡಿಸಿ. ನಿಮ್ಮೂರಿನ ನಿಮ್ಮ ಜಿಲ್ಲೆಯ ನಿಮ್ಮ ತಾಲೂಕಿನ ಅದ್ಭುತಗಳನ್ನು ಹುಡುಕಿ. ಈ ಅಭಿಯಾನದಲ್ಲಿ ಭಾಗವಹಿಸಿ.